ನಾಡಿನ ಎಲ್ಲಾ ಆಳ್ಮೆಗರಿಗೆ ಇನ್ನು ಮುಂದೆ ಅರಿಶಿಣ ಕೆಂಪು ಕೊರಳ ಪಟ್ಟಿ


೧೭ ಮುಮ್ಮಳೆ ೨೦೨೪, ೦೮:೨೫ ಏರುಹೊತ್ತು, 163 ಓದು

ಕರ್ನಾಟಕ ನಾಡಳಿತವು ಆಡಳಿತದಲ್ಲಿ ಕನ್ನಡತನವನ್ನು ತೋರಲು ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಆಡಳಿತದ ಎಲ್ಲಾ ಕೆಲಸಗಾರರು ಮತ್ತು ಆಳ್ಮೆಗರು ಇದುವರೆಗೂ ತಮ್ಮ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಹಾಕಿಕೊಳ್ಳಲು ಬಾನೊಗರಿನ ದಾರವನ್ನು ಬಳಸುತ್ತಿದ್ದರು. ಇದೀಗ ಬಾನೊಗರಿನ ಮಾರಾಗಿ ಕನ್ನಡದ್ದೇ ಒಗರುಗಳಾದ ಅರಿಶಿಣ ಮತ್ತು ಕೆಂಪು ಬಣ್ಣದ ಪಟ್ಟಿಯನ್ನು ತಮ್ಮ ಗುರುತಿನ ಚೀಟಿಯನ್ನು ಕತ್ತಿಗೆ ತೂಗು ಹಾಕಿಕೊಳ್ಳಲು ಬಳಸಬೇಕೆಂದು ಆಡಳಿತವು ಅಪ್ಪಣೆ ನೀಡಿದೆ. ತನ್ನ ಆಳ್ವಿಕೆಯ ಎಲ್ಲಾ ಕೊಂಬೆಗಳಲ್ಲೂ ಈ ಕಟ್ಟಳೆಯನ್ನು ಅಳವಡಿಸಿಕೊಳ್ಳಬೇಕೆಂದು ಕಟ್ಟುನಿಟ್ಟಿನ ಅಪ್ಪಣೆಯನ್ನು ಹೊರಡಿಸಿದೆ.

ಈ ಮೂಲಕ ಸಿದ್ಧರಾಮಯ್ಯ ಆಡಳಿತದ ಕರ್ನಾಟಕ ನಾಡಳಿತವು ಆಡಳಿತದಲ್ಲಿ ಕನ್ನಡತನವನ್ನು ತೋರಲು ಮತ್ತೊಂದು ಹೆಜ್ಜೆಯನ್ನು ಇರಿಸಿದಂತಾಗಿದೆ. ಈ ನಾಡಿಗೆ ಕರ್ನಾಟಕ ಎಂದು ಹೆಸರಿಟ್ಟು ಅದಾಗಲೇ ೫೦ ಏಡುಗಳು ಕಳೆದಿರುವ ಈ ಹೊತ್ತಿನಲ್ಲಿ ಆಡಳಿತದಲ್ಲಿ ಹೆಚ್ಚಾಗಿ ಕನ್ನಡತನವನ್ನು ತೋರಬೇಕಾಗಿದೆ ಎಂಬುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದು ಆಳ್ಮೆಗಾರರಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಒಲವು ಉಂಟಾಗುವಂತೆ ಮಾಡಲಿದೆ ಎಂಬ ಮಾತು ಕೇಳಿ ಬಂದಿದೆ.

ಹೀಗೊಂದು ಕಟ್ಟಳೆಯನ್ನು ಮಾಡಬೇಕೆಂದು ಕನ್ನಡ ಹೋರಾಟಗಾರರು ಹಿಂದಿನಿಂದಲೂ ಆಡಳಿತದ ಮೇಲೆ ಒತ್ತಡವನ್ನು ಹಾಕಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು.

ಹಂಚಿರಿ: