ಕವಿರಾಜ್, ಅರುಣ್ ಜಾವಗಲ್, ಶಿವಣ್ಣ ಗುಂಡಾಣವರ ಮತ್ತು ಹಲವರ ಮುಂದಾಳುತನದಲ್ಲಿ ನಡೆದ ನಮ್ಮ ನಾಡು ನಮ್ಮ ಆಳ್ವಿಕೆ ಮಾತು ಕೂಟವು ಇಂದು ಬೆಂಗಳೂರು ಹೊಳಲಿನ ನಟ್ಟ ನಡುವೆ ಇರುವ ಚಾಲುಕ್ಯ ತಿರುಗು ಬಳಿಯ ಬಸವ ಸಮಿತಿಯಲ್ಲಿ ಗೆಲುವಾಗಿ ನಡೆಯಿತು.
ಕವಿರಾಜ್ ಅವರು ಕರ್ನಾಟಕಕ್ಕೆ ಆಗುತ್ತಿರುವ ಮೋಸಗಳ ಬಗ್ಗೆ ಮಾತನಾಡುವ ಮೂಲಕ ನಾಡಿಗೆ ತನ್ನದೇ ಆದ ಕಡೆಚಿಯೊಂದರ ಬೇಕಾಗಿಕೆ ಎಶ್ಟಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದರೆ, ಕರ್ಣಾಟ ಬಲ ಒಯ್ಯುಗೆಯ ಬುವನೇಶ್ ಅವರು ಕನ್ನಡಿಗರ ಹಿನ್ನಡವಳಿಯ ಬಗ್ಗೆ ತಿಳಿಸಿ ಕೊಟ್ಟರು.
ಆ ಬಳಿಕ ಕುಮ್. ವೀರಬದ್ರಪ್ಪ ಅವರು ಮಾತನಾಡಿ, ತಮ್ಮಂತವರು ಅಂದಿನ ಗಡಿನಾಡಿನ ಕನ್ನಡ ಉಳಿವಿಗಾಗಿ ಹೋರಾಡಿದ, ಪಡಿಪಾಟಲು ಪಟ್ಟ ಬಗ್ಗೆ ತಿಳಿಸಿದರು. ಮತ್ತು ಇಂದಿನ ಮಂದಿ ಕನ್ನಡದಿಂದ ತೆರವಾಗಿ ಆಂಗ್ಲದ ಮೊರೆ ಹೋಗುತ್ತಿರುವ ಬಗ್ಗೆಯೂ ನೋವು ತೋಡಿಕೊಂಡರು. ತಾವು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಕಲಿಕೆ ಕೊಡಿಸಿದರೂ ಮೊಮ್ಮಕ್ಕಳು ಮಾತ್ರ ಆಂಗ್ಲ ಒಯ್ಯುಗೆಯಲ್ಲಿ ಕಲಿಯುತ್ತಿರುವ ಬಗ್ಗೆ ಬೇಸರ ತೋಡಿಕೊಂಡರು.
ಪ್ರಜಾವಾಣಿಯ ಹನೀಫ್ ಅವರು ಕೂಡ ಕನ್ನಡದ ಕೀಳುಪಾಡು ಬಗ್ಗೆ ತಮ್ಮ ಮಾತುಗಳಲ್ಲಿ ನೋವು ತೋಡಿಕೊಂಡರು.
ಆನಂದ್ ಗುರು ಅವರು ಮಾತನಾಡಿ, ನಮ್ಮ ಅರಕಟ್ಟಳೆಯಲ್ಲಿ ನುಡಿಸಾಟಿಗೆ ಒತ್ತಿಕೊಂಡಂತೆ ಯಾವುದೇ ಕಟ್ಟಳೆ ಇಲ್ಲ. ಇದು ಹಿಂದಿ ಹೇರಿಕೆಗೆ ನೆರವಾಗಿದೆ. ಇದಕ್ಕೆ ನಂಟಿರುವ ಅರಕಟ್ಟಳೆಯ ಪಾಲು ೧೭ನ್ನು ತಿದ್ದುಪಡಿ ಮಾಡಬೇಕು ಎಂದು ಹೇಳಿದರು.
ಹೊಸ ಕಡೆಚಿಗೆ ನಲಿವರಿಕೆ ತಿಳಿಸಿದ ಹಂಸಲೇಖ
ಮೇಲೊತ್ತಿನ ಬರುವಿಗರಾಗಿದ್ದ ಹೆಸರಾಂತ ಇನಿತ ಮೋಡಿಗಾರ ಹಂಸಲೇಖ ಅವರು ಮಾತನಾಡಿ ಹೊಸ ಮೊಗಸನ್ನು ಕೈಗೊಂಡಿರುವ ಹೊಸ ತಂಡಕ್ಕೆ ನಲಿವರಿಕೆ ಕೋರಿದರು. ಹೊಸ ಕಡೆಚಿಯು ನಮ್ಮ ನಾಡಿಗೆ ಕಡ್ಡಾಯವಾಗಿ ಬೇಕಾಗಿದೆ. ಅದನ್ನು ಕಟ್ಟಲು ಹೊರಟಿರುವ ಕವಿರಾಜ್ ಮತ್ತವರ ತಂಡಕ್ಕೆ ಗೆಲುವಾಗಲಿದೆ ಎಂದೇ ಅವರು ಬಗೆತುಂಬಿ ಹಾರೈಸಿದರು.
ತುಂಬಿದ ಕೂಡುಮನೆಯಲ್ಲಿ ಆಗುಹ ತೊಡಗಿದ ಹೊತ್ತಿನಿಂದ ಕೊನೆಯಾಗುವ ವರೆಗೂ ಒಂದೂ ಕೂರುಗೆ ತೆರವಾಗದ ಹಾಗೆ ಮಂದಿ ಕೂತು ಕೇಳಿಸಿಕೊಂಡಿದ್ದು ಕನ್ನಡಿಗರಿಗೆ ತಮ್ಮದೇ ಆದ ಕಡೆಚಿಯ ಬೇಡಿಕೆ ಎಶ್ಟಿದೆ ಅನ್ನುವುದನ್ನು ತೋರಿಸಿತು.
ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಕವಿರಾಜ್, ಗಿರಿರಾಜ್, ಅರುಣ್ ಜಾವಗಲ್, ಶಿವು ಗುಂಡಾಣವರ, ಆನಂದ್ ಗುರು, ಜ್ಞಾನ ಮದು, ಸಜಿತ್, ರವಿ ಆಲದಮರ, ಬುವನೇಶ್, ಶ್ರುತಿ ಮೊದಲಾದವರು ಆಗುಹದಲ್ಲಿ ತೊಡಗಿಸಿಕೊಂಡಿದ್ದಾರೆ.