ಕನ್ನಡದೊಳಗೆ ಸಂಸ್ಕೃತ, ಪಾಲಿ, ಪ್ರಾಕೃತ, ಮರಾಟಿ, ಆಂಗ್ಲ ಮೊದಲಾದ ನುಡಿಗಳ ಒರೆಗಳು ಬೆರಕೆಯಾಗಿರುವುದು ತಿಳಿದಿರುವುದೇ ಆಗಿದೆ. ಇವು ಆಡು ಮಾತಿನಲ್ಲಿ ಅಶ್ಟಾಗಿ ಕಂಡು ಬಾರದಿದ್ದರೂ ಬರವಣಿಗೆಯಲ್ಲಿ ಹಾಗೂ ನಾಲ್ಬರಹಗಳಲ್ಲಿ ಎಲ್ಲೆ ಮೀರಿ ಬಳಕೆಯಾಗುತ್ತಿವೆ. ಇದು ದಿಟ ಕನ್ನಡದೊಲವಿಗಳನ್ನು ಅಳುಕಿಗೆ ತಳ್ಳಿವೆ. ಶ್ರೀವಿಜಯನು ಹನ್ನೂರು ಏಡುಗಳ ಹಿಂದೆಯೇ ಈ ಬಗ್ಗೆ ಎಚ್ಚರಿಕೆ ನೀಡಿದ್ದನು. ಎಂಟು ನೂರು ಏಡುಗಳ ಹಿಂದೆ ಪಾಡುಬರೆಗ ಆಂಡಯ್ಯನು ತನ್ನ 'ಕಾವನ ಗೆಲ್ಲ' ಹೊತ್ತಗೆಯೊಂದಿಗೆ ಸಕ್ಕದ ಒರೆಗಳ ಹೊರೆಗಳನ್ನು ತೊಡೆದು ಹಾಕುವ ಬಗ್ಗೆ ಮೊದಲ ಬಾರಿಗೆ ಮುಂದಡಿ ಇರಿಸಿದ್ದನು. ಆದರೆ ಅವನ ಬಳಿಕ ಯಾವ ಬರೆಗರೂ ಈ ಬಗ್ಗೆ ಅಶ್ಟಾಗಿ ಗಮನ ಹರಿಸಲಿಲ್ಲ.
ಆಮೇಲೆ ಮತ್ತೊಂದು ಇಂತಹುದೇ ಮೊಗಸು ನಮಗೆ ಕಂಡು ಬರುವುದು ಕಳೆದ ನೂರೇಡಿನಲ್ಲೇ. ಇಂದಿಗೆ ನೂರು ಏಡುಗಳಶ್ಟು ಹಿಂದೆ ಕುವೆಂಪು ಅವರ ಬಾವನೆಂಟರಾದ ಕೊಳಂಬೆ ಪುಟ್ಟಣ್ಣ ಗವುಡರು ಈ ಬಗೆಯ ಮೊಗಸಿಕೆಗೆ ಕಯ್ ಹಾಕಿದ್ದರು. ಅವರು 'ಕಾಲೂರ ಚೆಲುವೆ' ಎಂಬ ಹಾಡುಬರೆತ ಮತ್ತು 'ಅಚ್ಚಗನ್ನಡ ನುಡಿಕೋಶ' ಎಂಬ ಒರೆನೆರಕೆಯನ್ನೂ ಉಂಟು ಮಾಡಿದರು. ಕನ್ನಡಿಗರೂ ಇಂದಿಗೂ ಆಂಡಯ್ಯನ ಬಳಿಕ ಪುಟ್ಟಣ್ಣ ಗವುಡರನ್ನು ನೆನೆಸಿಕೊಳ್ಳುತ್ತಾರೆ. ಅವರ ಹೊತ್ತಗೆಗಳನ್ನು ೧೯೬೦ ಹೊತ್ತಿನಲ್ಲಿ ಕುವೆಂಪು ಅವರ ಮಗ ತೇಜಸ್ವಿಯವರು ಅಚ್ಚು ಹಾಕಿಸಿದರು ಎಂಬುದಾಗಿ ತಿಳಿದು ಬಂದಿದೆ.
ಆ ಬಳಿಕ ಮತ್ತೆ ಯಾರೂ ಈ ಬಗ್ಗೆ ಅಶ್ಟಾಗಿ ಕೆಲಸ ಮಾಡಿದ ಬಗ್ಗೆ ನಮಗೆ ಕಂಡು ಬರುವುದಿಲ್ಲ. ತೀರಾ ಇತ್ತೀಚಿಗೆ ಡಿ.ಎನ್. ಶಂಕರ ಬಟ್, ಡಿ.ಶಿವಪ್ಪ ಮೊದಲಾದವರು ನುಡಿಯರಿಮೆ ಬಗ್ಗೆ ಹೆಚ್ಚಿನ ಕೆಲಸದಲ್ಲಿ ತೊಡಗಿಸಿಕೊಂಡರು. ಅದರಲ್ಲೂ ಶಂಕರ ಬಟ್ಟರಂತೂ ಹಿಂದೆಂದೂ ಕನ್ನಡಕ್ಕಾಗಿ ಯಾರೂ ಮಾಡಿರದಿದ್ದನ್ತಹ ನುಡಿಯರಿಮೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಬ್ಬರಹದಲ್ಲಿ ಉಂಟಾಗಿರುವ ತೊಗಕುಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಸುಮಾರು ಮೂವತ್ತು ಹೊತ್ತಗೆಗಳನ್ನು ಕನ್ನಡಿಗರ ಮುಂದಿಟ್ಟಿದ್ದಾರೆ. ಇವುಗಳಲ್ಲಿ ಕನ್ನಡ ಸೊಲ್ಲರಿಮೆಯಿಂದ ಹಿಡಿದು 'ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು', ಹಾಗೂ 'ಆಂಗ್ಲ - ಕನ್ನಡ ಪಾದನೆರಕೆ'ಗಳೆಲ್ಲ ಸೇರಿವೆ. ಸಂಸ್ಕೃತದ ಹಿಡಿತಡಿನ ಕನ್ನಡವನ್ನು ಪಾರುಮಾಡಲಾಗದೆ ತೊಳಲಾಡುತ್ತಿದ್ದ ಕನ್ನಡಿಗರಿಗೆ ಶಂಕರ ಬಟ್ಟರ ಹೊತ್ತಗೆಗಳು ದಿಟಕ್ಕೂ ದಾರಿಸೊಡರುಗಳಾಗಿವೆ.
ಇವೆಲ್ಲವುಗಳ ಬಳಿಕ ಹಲವು ಬರೆಗರು ತಮ್ಮ ಬರವಣಿಗೆಯಲ್ಲಿ ಸಕ್ಕದ ಮತ್ತು ಬೇರೆ ನುಡಿಗಳ ಬೆರಕೆ ಒರೆಗಳ ಹೊರೆಯನ್ನು ಕಡಿಮೆ ಮಾಡಿಕೊಳ್ಳುವತ್ತ ಗಮನ ಹಾರಿಸತೊಡಗಿದ್ದಾರೆ. ಆದರೂ ಇಡಿಯಾಗಿ ಆ ಹೊರೆಯನ್ನು ಕಳಚಿಕೊಳ್ಳಲು ಹೆಚ್ಚಿನವರಿಗೆ ಇನ್ನೂ ಆಗಿಲ್ಲ. ಆದರೆ ಅದೂ ಕನ್ನಡಿಗರ ಕಯ್ಲಾಗದ ಕೆಲಸವೇನಲ್ಲ ಎಂಬುದನ್ನೂ ಶ್ರೀಪತಿ ಗೋಗಡಿಗೆಯವರು ತಮ್ಮ ಇತ್ತೀಚಿನ 'ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು' ಎಂಬ ಹೊತ್ತಗೆಯೊಂದಿಗೆ ತಿಳಿಸಿ ಕೊಟ್ಟಿದ್ದಾರೆ. ೨೬೦ ಬದಿಗಳ ಈ ಹೊತ್ತಗೆಯನ್ನು ಒಂದೂ ಹೆರನುಡಿಯ ಎರವಲು ಒರೆಗಳನ್ನು ಬಳಸದೇ ಬರೆಯಲಾಗಿದೆ. ಬೇರೆ ನುಡಿಯ ಒರೆಗಳಿಲ್ಲದ ಸಲುವಾಗಿ ಈ ಹೊತ್ತಗೆಯಲ್ಲಿ ಹೆದ್ದುಲಿಗಳು ಕೂಡ ನಮಗೆ ಕಂಡು ಬರುವುದಿಲ್ಲ.
ಈ ಹೊತ್ತಗೆಯು ಕುರ್ದಿಶ್ ನುಡಿಗಾಗಿ ಹೋರಾಡಿ ಮಾಡಿದ ಅಪ್ಪಟ ನುಡಿ ಹೋರಾಡಿಗ 'ಆಪೆ ಮೂಸಾ ಆಂಟೆರ್' ಅವರ ಬದುಕು ಬರಹದ ಟರ್ಕಿಶ್ ನುಡಿಯ ಕನ್ನಡ ನೂಡಿಮಾರುಗೆಯಾಗಿದೆ. ಈ ಹೊತ್ತಗೆಯನ್ನು ಓದುತ್ತಾ ಹೋದಂತೆ ಅಪ್ಪಟ ಕನ್ನಡದ ಹಲವು ಒರೆಗಳ ಗುರುತು ನಮಗೆ ಆಗುವುದರೊಂದಿಗೆ ಕುರ್ದಿಶ್ ನಾಡಿನ ಮಂದಿಯ ಬದುಕು ಮತ್ತು ಅವರ ನುಡಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆಯೂ ತಿಳಿಯುತ್ತಾ ಹೋಗುತ್ತದೆ. ಈ ಹೊತ್ತಗೆಯು ಈಗ 'ಪಿಸುಮಾತು ಅಚ್ಚುಮನೆ' ಯವರ ಮಿಂದಾವಿನಲ್ಲಿ ದೊರೆಯುತ್ತಿದೆ.