ಎಸ್.ಬಿ.ಐ. ಮತ್ತು ಪಂಜಾಬ್ ನ್ಯಾಷನಲ್ ಹಣಮನೆಗಳಲ್ಲಿ ಕರ್ನಾಟಕ ಆಡಳಿತವು ಹೊಂದಿರುವ ಎಲ್ಲಾ ಕಡತಗಳನ್ನು ಕೊನೆಗೊಳಿಸಲು ನಾಡಾಳಿತ ಅಪ್ಪಣೆ ನೀಡಿರುವುದಾಗಿ ವರದಿಯಾದೆ. ಇತ್ತೀಚಿಗಶ್ಟೇ ಈ ಹಣಮನೆಗಳಲ್ಲಿ ತಪ್ಪೆಸಕ ನಡೆದಿರುವ ಬಗ್ಗೆ ಸುದ್ದಿಯಾಗಿತ್ತು. ಆಡಳಿತದ ಅರಿವಿಗೆ ಬಾರದೆ ಕೆಲವು ಆಳ್ಮೆಯಾಳುಗಳು ಆಡಳಿತದ ದುಡ್ಡನ್ನು ಕೆಟ್ಟಬಳಕೆ ಮಾಡಿಕೊಂಡಿದ್ದರು. ಇದರಿಂದಾಗಿ ನಾಡಳಿತವು ಒಕ್ಕೂಟದೆಲ್ಲೆಡೆ ಮುಜುಗರ ಪಡುವಂತಾಗಿತ್ತು .
ಇದನ್ನು ಸರಿಪಡಿಸಿಕೊಳ್ಳಲೋಸುಗ ಇದೀಗ ದೊಡ್ಡ ಕೆಲಸಕ್ಕೆ ಕಯ್ ಹಾಕಿರುವ ನಾಡಳಿತವು ಎಸ್.ಬಿ.ಐ. ಮತ್ತು ಪಂಜಾಬ್ ನ್ಯಾಷನಲ್ ಹಣಮನೆಗಳಲ್ಲಿ ಆಡಳಿತವು ಹೊಂದಿರುವ ಎಲ್ಲಾ ಕಡತಗಳನ್ನು ಕೊನೆಗೊಳಿಸಿ , ಈ ಹಣಮನೆಗಳಲ್ಲಿ ಇರುವ ತನ್ನ ಎಲ್ಲಾ ಹಣವನ್ನು ಮರಳಿ ಪಡೆದುಕೊಳ್ಳುವಂತೆ ತನ್ನೆಲ್ಲಾ ಆಡಳಿತ ರೆಂಬೆಗಳಿಗೆ ಅಪ್ಪಣೆ ನೀಡಿದೆ.
ಇದು ಆಡಳಿತ ವಲಯದಲ್ಲಿ ದೊಡ್ಡ ಅಲುಗಾಟ ಉಂಟು ಮಾಡಿದ್ದು ಆಡಳಿತದ ಮುಂದಿನ ನಡೆ ಏನು ಎಂಬುದನ್ನು ಎದುರು ನೋಡುವಂತಾಗಿದೆ. ನಾಡಳಿತವು ಮುಂದೆ ಯಾವ ಹಣಮನೆಗಳನ್ನು ತನ್ನ ಆಡಳಿತಕ್ಕೆ ಬಳಸಿಕೊಳ್ಳಲಿದೆ ಎಂಬುದು ಕೂಡ ಇಣುಕಿ ನೋಡುವಂತಾಗಿದ್ದು , ಕರ್ನಾಟಕ ಆಡಳಿತದ ಒಡೆತನದಲ್ಲಿ ಇರುವ ಅಪೆಕ್ಸ್ ಹಣಮನೆಯನ್ನೇ ಬಳಸಿಕೊಳ್ಳುತ್ತಾರಾ ಇಲ್ಲವೇ ಕರ್ನಾಟಕ ಬೇರಿನ ಕರ್ನಾಟಕ ಬ್ಯಾಂಕ್ ಅನ್ನು ಬಳಸಿಕೊಳ್ಳುತ್ತಾರಾ, ಅದೂ ಇಲ್ಲವೇ ನಮ್ಮ ನಾಡಿನದ್ದೇ ಆದ ಒಂದು ಬೇರೆಯದೇ ಹಣಮನೆಯನ್ನು (ಕೇರಳಂ ಆಡಳಿತವು ಮಾಡಿಕೊಂಡಿರುವಂತೆ ) ಉಂಟು ಮಾಡುತ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ .