ಬಿಡುಗಡೆ ನಾಳಿಗೆ ಎಂದಿನಂತೆ ಕನ್ನಡದಲ್ಲೇ ನಲಿವರಿಕೆ ತಿಳಿಸಿದ ಇಸ್ರೇಲ್


೧೬ ಮುಮ್ಮಳೆ ೨೦೨೪, ೧೨:೧೫ ಇಳಿಹೊತ್ತು, 105 ಓದು

ಇಸ್ರೇಲ್ ಎಲ್ಲಾ ಬಾರಿಯಂತೆ ಈ ಬಾರಿಯೂ ಭಾರತ ಒಕ್ಕೂಟದ ಬಿಡುಗಡೆ ನಾಳೆಗೆ ಕನ್ನಡದಲ್ಲಿ ಕೂಡ ಟ್ವೀಟ್ ಮಾಡುವ ಮೂಲಕ ತನ್ನ ನಲಿವರಿಕೆಯನ್ನ ತಿಳಿಸಿದೆ. ಈ ಬಾರಿ ಮಾತ್ರವಲ್ಲದೆ ಎಲ್ಲಾ ಬಾರಿಯೂ ಇಸ್ರೇಲ್ ಭಾರತಕ್ಕೆ ಯಾವುದೇ ನಲಿವರಿಕೆ ತಿಳಿಸುವಾಗಲೂ ತಪ್ಪದೇ ಕನ್ನಡದಲ್ಲಿಯೂ ನಲಿವರಿಕೆಯನ್ನು ತಿಳಿಸುತ್ತದೆ.

ಆದರೆ ಇಸ್ರೇಲ್ ಕನ್ನಡದಲ್ಲಿ ಟ್ವೀಟ್ ಮಾಡಲು ಏಕೆ ತಪ್ಪಿಸಿಕೊಳ್ಳುವುದಿಲ್ಲ? 

ಇದಕ್ಕೆ ಕಾರಣರಾದವರು ಅಂದಿನ ಮಯ್ಸೂರು ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು! ೧೯೧೮ ರಲ್ಲಿ ಅಂದರೆ ಇಂದಿಗೆ ೧೦೬ ಏಡುಗಳ ಹಿಂದೆ ನಾಲ್ವಡಿ ಅವರು ಮಯ್ಸೂರು ನಾಡಿನ ಕಾದಾಳು ಪಡೆಯನ್ನು ಗೆಳೆಯರ ನಾಡುಗಳ ಒಕ್ಕೂಟದ ಕಡೆಗೆ ಒಟ್ಟಮಾನ್ ಟರ್ಕ್ಸ್ ಮತ್ತು ಜರ್ಮನ್ ಮೆಷಿನ್ ಗನ್‌ಗಳ ಎದಿರು ಹೈಫಾವನ್ನು ಹಿಡಿತಕ್ಕೆ ಪಡೆಯುವಲ್ಲಿ ತೀರ್ಮಾನದ ನಡೆಯನ್ನು ಇಟ್ಟಿತ್ತು. ಆ ಮೂಲಕ ೪೦೦ ಏಡುಗಳ ಟರ್ಕ್ ಆಡಳಿತವನ್ನು ಕೊನೆಗೊಳಿಸಿತ್ತು. ಕನ್ನಡಿಗರ ಈ ಒದವಿಗೆ ನನ್ನೀ ತಿಳಿಸಲೋಸುಗ ಇಸ್ರೇಲ್ ನಾಡು ಇಂದಿಗೂ ಕನ್ನಡದಲ್ಲಿ ನಲಿವರಿಕೆ ತಿಳಿಸುವ ನಡೆಪಾಡನ್ನು ಇರಿಸಿಕೊಂಡಿದೆ.

ಹಂಚಿರಿ: