ಕನ್ನಡಿಗರು ಕಳೆದುಕೊಂಡ ಕನ್ನಡ-೨


೧೦ ಮೊಬ್ಬೇಸಿಗೆ ೨೦೨೬, ೦೭:೫೮ ಏರುಹೊತ್ತು, 1 ಓದು

ಒಂದು ನುಡಿಯ ಬೆಳವಣಿಗೆಯಲ್ಲಿ ಯಾವ ಯಾವ ತುಂಡುಗಳು ಕಯ್ಯಾಡಿಸುತ್ತವೆ ಎಂಬುದರ ಬಗ್ಗೆ ಈ ಹೊತ್ತಿನ ಕನ್ನಡ ನುಡಿಯರಿಗರಾದ ಶಂಕರ ಬಟ್ ಅವರು ತಮ್ಮ ಹೊತ್ತಗೆಗಳಲ್ಲಿ ತುಂಬಾ ಹರವಿನಲ್ಲಿ ಬಿಡಿಸಿ ತಿಳಿಸಿ ಕೊಟ್ಟಿದ್ದಾರೆ. ಅವುಗಳನ್ನಿಲ್ಲಿ ನಾವು ಕೊಂಚ ಒರೆಗೆ ಹಚ್ಚಿ ನೋಡಿದರೆ ನಮ್ಮ ನುಡಿಯಾದ ಕನ್ನಡವು ಸರಿಯಾದ ಬೆಳವಣಿಗೆಯ ದಾರಿಯನ್ನು ಹಿಡಿದಿದೆಯೇ? ಇಲ್ಲವೇ ಬೀಳುವಣಿಗೆಯ ದಾರಿ ಹಿಡಿದಿದೆಯೇ? ಅನ್ನುವ ಬಗ್ಗೆ ತಿಳುವಳಿಕೆ ಮೂಡಬಹುದು.

ಒಂದು ನುಡಿಯ ಉಳಿವು ಹಾಗೂ ಬೆಳವಣಿಗೆಗೆ ಆಡಳಿತದ ಒತ್ತಾಸೆ ತುಂಬಾ ಬೇಕಾದುದು ಅನ್ನುವುದನ್ನು ಈ ಹಿಂದಿನ ನನ್ನ ಬರಹದಲ್ಲೇ ನೋಡಿದ್ದೇವೆ. ಅದನ್ನು ಹೊರತು ಪಡಿಸಿದರೆ ಬೇರೆ ಯಾವೆಲ್ಲಾ ತುಂಡುಗಳು ನುಡಿಯ ಬೆಳವಣಿಗೆಗೆ ಬೇಕಾಗುತ್ತವೆ ಎಂಬುದರ ಬಗ್ಗೆ ಗಮನ ಹರಿಸೋಣ.

ಯಾವುದೇ ನುಡಿಯು ಯಾವುದೇ ಹೊತ್ತಿನಲ್ಲಿ ತುಂಬಿದ ನುಡಿಯಾಗಿ ಇರಬಾರದು. ಒಂದು ವೇಳೆ ಹಾಗೆ ಅದು ತಾನು ಎಲ್ಲವನ್ನೂ ತುಂಬಿಕೊಂಡ ನುಡಿ, ಇನ್ನೂ ಇದರೊಳಗೆ ಏನೂ ಮಾರ್ಪಾಡು ಮಾಡಬಾರದು ಎಂದುಕೊಂಡರೆ ಆ ನುಡಿಯು ಅಲ್ಲಿಗೆ ಕೊನೆಯಾಗುತ್ತದೆ. ಅದರ ಮುಂದಿನ ಪೀಳಿಗೆಯ ಮಂದಿ ಅದನ್ನು ಬಳಸಲು ಹಿಂದೇಟು ಹಾಕತೊಡಗುತ್ತಾರೆ. ಏಕೆಂದರೆ ಅದು ಆ ಹೊಸ ಪೀಳಿಗೆಯ ಹೊತ್ತಿಗೆ ತಕ್ಕುದಾದ ನುಡಿಯಾಗಿ ಮಾರ್ಪಾಡು ಹೊಂದಿರುವುದಿಲ್ಲ. ಮತ್ತೆ ಇದಕ್ಕೆ ಎತ್ತುಗೆಯಾಗಿ ಸಂಸ್ಕೃತವನ್ನೇ ಹೇಳಬೇಕಾಗುತ್ತದೆ! ಅದು ಹೊತ್ತಿಗೆ ತಕ್ಕಂತೆ ಮಾರ್ಪಾಡು ಹೊಂದದೇ ಹೋದ ಸಲುವಾಗಿಯೇ ಮಂದಿಯ ಬಳಕೆಯಿಂದ ತೆರವಾಯಿತು. ಆದರೆ ಹೊತ್ತು ಹೊತ್ತಿಗೆ ಮಾರ್ಪಾಡನ್ನು ಅಳವಡಿಸಿಕೊಂಡ ಕನ್ನಡದಂತಹ ನುಡಿಗಳು ಇಂದಿಗೂ ಮಂದಿ ಬಳಕೆಯಲ್ಲಿ ಗಟ್ಟಿಯಾಗಿ ನಿಂತುಕೊಂಡಿವೆ. ಇದರಿಂದ ತಿಳಿಯುವುದೇನೆಂದರೆ ಒಂದು ನುಡಿಯ ಉಳಿಯುವಿಕೆಯಲ್ಲಿ ಹೊತ್ತಿಗೆ ತಕ್ಕಂತೆ ತನ್ನನ್ನು ಅಣಿಗೊಳಿಸಿಕೊಳ್ಳುವುದು ತುಂಬಾ ಬೇಕಾದ ತುಂಡಾಗಿದೆ ಅನ್ನುವುದು. ಆದರೆ ಕನ್ನಡದ ಮಟ್ಟಿಗೆ ಹೇಳುವುದಾದರೆ ಹೊತ್ತಿಗೆ ತಕ್ಕ ಅಣಿಗೊಳಿಸಿಕೊಳ್ಳುವಿಕೆ ಹಾಗೂ ಮಾರ್ಪಾಡಿನ ನಡೆಯಲ್ಲಿ ಕೆಲವೊಂದು ಎಡವಟ್ಟುಗಳು ನಡೆದು ಹೋಗಿರುವುದರಿಂದಾಗಿ, ನಾವೀಗ ಅದರ ಬಗ್ಗೆ ಬಗೆಯಿಸಿ ಸರಿ ಪಡಿಸಿಕೊಳ್ಳಲೇ ಬೇಕಾದ ಬೇಕಾಗಿಕೆ ಏರ್ಪಟ್ಟಿದೆ.

ಕನ್ನಡವು ಹೊತ್ತು ಹೊತ್ತಿಗೆ ಸರಿಯಾಗಿ ತನ್ನನ್ನು ಮಾರ್ಪಾಡು ಮಾಡಿಕೊಂಡಿರುವುದೇನೋ ಸರಿ. ಆದರೆ ಅದು ಸರಿಯಾದ ಬಗೆಯಲ್ಲಿ ನಡೆದಿದೆಯೇ ಅಂದರೆ ಇಲ್ಲ! ಆದರೆ ಈ ತಪ್ಪಾದ ನಡೆಯು ಇಂದು ನಿನ್ನೆಯದಲ್ಲ, ನೂರಾರು ಏಡುಗಳ ಹಿಂದೆಯೇ ಈ ನಾಡಿಗೆ ವಯಿದಿಕರ ಬರುವಿಕೆಯೊಂದಿಗೇ ತೊಡಗಿಕೊಂಡಿದ್ದಿರಬೇಕು ಅನ್ನುವುದು ನಮ್ಮ ಹಳೆಯ ಕನ್ನಡ ನಲ್ಬರಹಗಳನ್ನು ನೋಡಿದರೆ ಗೊತ್ತಾಗುತ್ತದೆ. ಅದಕ್ಕಾಗಿಯೇ ಒಂಬತ್ತನೇ ನೂರೇಡಿನ ಶ್ರೀವಿಜಯನು ತನ್ನ ಕವಿರಾಜ ಮಾರ್ಗಂ ಹೊತ್ತಗೆಯಲ್ಲಿ ಈ ಬಗ್ಗೆ ಹಲವಾರು ಎಚ್ಚರಿಕೆಗಳನ್ನು ಕೊಟ್ಟಿದ್ದಾನೆ. ಸಂಸ್ಕೃತವು ಹಾಡುಗೆ ಬರೆಯಲು ತಕ್ಕುದಾದ ನುಡಿಯಾದುದರಿಂದ, ಅದನ್ನು ನಮ್ಮ ಹಾಡಿಕೆಯ ಬೇಕಿಗೆಗೆ ತಕ್ಕಂತೆ ಬಳಸಿಕೊಳ್ಳಬೇಕೇ ಹೊರತಾಗಿ ಎಗ್ಗು ಸಿಗ್ಗಿಲ್ಲದೇ ಸಕ್ಕವನ್ನೂ ಬಳಸಬಾರದು ಅನ್ನುವುದನ್ನು ಅವನು ತಿಳಿಸಿದ್ದಾನೆ. ಸರಿಯಾದ ಬಗೆಯಲ್ಲಿ ಬಳಸಿದರೆ ಮದ್ದಳೆಯ ಸಪ್ಪಳದಂತೆ ಸೊಗಸಾಗಿರುತ್ತದೆಯಲ್ಲದೆ, ತಪ್ಪಾಗಿ ಬಳಸಿದರೆ ಕರಡಿಗೆಯೊಳಗೆ ಕಲ್ಲು ಹಾಕಿ ಆಡಿಸಿದಂತೆ ಕೀರಲು ಸಪ್ಪಳವಾಗುತ್ತದೆ ಎಂದೂ ಎಚ್ಚರಿಸಿದ್ದಾನೆ.  ಸಕ್ಕವನ್ನೂ ಬೇಕಾದಲ್ಲಿ ಅಶ್ಟೇ ಬಳಸಿಕೊಳ್ಳಬೇಕು ಎಂದು ವಿಜಯನು ಹೇಳಿದ್ದು ಹಾಡಿಕೆಯ ಕುರಿತಾಗಿ ಅಶ್ಟೇ ಹೊರತೂ ಬೇರೆ ಬರಹಗಳಿಗೊ, ಮಾತಿಗೊ ಅಲ್ಲ. ಆದರೆ ಮುಂದೆ ನಾವು ಮಾಡಿಕೊಂಡಿದ್ದು ಏನು? ಬೇಕಿರಲಿ, ಬೇಡದಿರಲಿ ಎಲ್ಲೆಂದರಲ್ಲಿ ಸಕ್ಕವನ್ನ ತಂದು ತುರುಕಿಕೊಂಡೇ ಬಂದಿದ್ದೇವೆ.

ಶ್ರೀವಿಜಯನ ಮಾತನ್ನು ಯಾರೂ ಕೇಳಲಿಲ್ಲ, ಆಂಡಯ್ಯನ ಹೊರತಾಗಿ! ನುಡಿಯೆಂದರೆ ಹಾಡುಗೆಯಲ್ಲ, ನಲ್ಬರಹಗಳಲ್ಲ.. ಮಾತು! ಆದರೆ ಅಂದು ನಲ್ಬರಹಗಳಲ್ಲಿ ತೂರಿಕೊಳಲು ತೊಡಗಿದ ಸಕ್ಕವು ಇಂದು ನಮ್ಮ ಮಾತಿನಲ್ಲೂ ಬೆರೆತುಕೊಂಡಿದೆ. ಹಳ್ಳಿಗರ ಮಾತಿನಲ್ಲಿ ಅಶ್ಟೊಂದು ಹೆರನುಡಿಯ ಒರೆಗಳು ಇಲ್ಲದಿದ್ದರೂ ಕಲಿತವರ ಬಾಯಲ್ಲಿ ಇವು ಹೆಚ್ಚಾಗಿ ತೂರಿಕೊಳ್ಳುತ್ತಿವೆ.

ಹಾಗೆಯೇ ಒಂದು ಬರಹವು ತುಂಬಾ ಮೇಲ್ಮಟ್ಟದ್ದಾಗಿ ತೋರಬೇಕು ಅಂದರೆ ಅದರಲ್ಲಿ ಸಕ್ಕದ ಒರೆಗಳು ಹೆಚ್ಚಾಗಿ ಇರಬೇಕು ಅನ್ನುವ ಒಂದು ಕುರುಡು ನಂಬಿಕೆಯೂ ಹುಟ್ಟಿಕೊಂಡಿದೆ. ಇದರಿಂದಾಗಿಯೂ ಏನೋ ನಮ್ಮ ದೊಡ್ಡ ದೊಡ್ಡ ನಲ್ಬರೆಹಗರು ಕೂಡ ತಮ್ಮ ನಲ್ಬರಹಗಳಲ್ಲಿ ಹೆಚ್ಚು ಹೆಚ್ಚಾಗಿ ಸಕ್ಕದ ಒರೆಗಳನ್ನು ತುಂಬಲು ತುಂಬಾ ಬಯಸುತ್ತಾರೆ. ಕೆಲವರ ಬರಹಗಳಂತೂ ಅವು ಕನ್ನಡ ಬರಿಗೆಯಲ್ಲಿ ಇರುವ ಸಲುವಾಗಿಯಶ್ಟೇ ಕನ್ನಡದ್ದು ಅನ್ನಿಸಿಕೊಳ್ಳುತ್ತವೆ ಹೊರತಾಗಿ, ಅವುಗಳಲ್ಲಿ ಹೆಚ್ಚಿನವು ಸಕ್ಕದ ಒರೆಗಳೇ ತುಂಬಿರುತ್ತವೆ! ಎತ್ತುಗೆಗೆ ಈ ಕೆಳಗಿನ ನಮ್ಮ ಅರಕಟ್ಟಳೆಯ ಒಂದು ನುಡಿಗಡಣವನ್ನು ಗಮನಿಸಿ:

“ಪರಂತು, ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ ಸಮಯದಲ್ಲಿ ಅವನಿಗೆ ಭಾರತ ಸರ್ಕಾರದ ಅಥವಾ ಅದರ ಯಾವುದೇ ಪೂರ್ವವರ್ತಿ ಸರ್ಕಾರಗಳ ಅಧೀನದಲ್ಲಿ ಅಥವಾ ಒಂದು ರಾಜ್ಯ ಸರ್ಕಾರದ ಅಥವಾ ಅದರ ಯಾವುದೇ ಪೂರ್ವವರ್ತಿ ಸರ್ಕಾರಗಳ ಅಧೀನದಲ್ಲಿ ಹಿಂದಿನ ಯಾವುದೇ ಸೇವೆಗೆ ಸಂಬಂಧಿಸಿದಂತೆ ನಿವೃತ್ತಿ ವೇತನವನ್ನು (ಅಸಮರ್ಥತೆಯ ಅಥವಾ ಗಾಯದ ನಿವೃತ್ತಿ ವೇತನವನ್ನು ಹೊರತುಪಡಿಸಿ) ಪಡೆಯುತ್ತಿದ್ದರೆ, ಉಚ್ಚ ನ್ಯಾಯಾಲಯದಲ್ಲಿನ ಸೇವೆಗೆ ಸಂಬಂಧಿಸಿದಂತೆ ಅವನ ಸಂಬಳದಲ್ಲಿ ಈ ಕೆಳಕಂಡವುಗಳನ್ನು ಕಳೆಯತಕ್ಕದ್ದು.

೪೬ ಒರೆಗಳಿರುವ ಈ ಪುಟ್ಟ ನುಡಿಗಡಣದಲ್ಲಿ ಒಟ್ಟು ೩೨ ಸಕ್ಕದ ಇಲ್ಲವೇ ಕನ್ನಡದ್ದಲ್ಲದ ಒರೆಗಳಿವೆ! ಅಂದರೆ ನೂರಕ್ಕೆ ೬೦% ಕ್ಕಿಂತಲೂ ಕನ್ನಡದ್ದಲ್ಲದ ಒರೆಗಳೇ! ನೀವು ನಮ್ಮ ಅರಕಟ್ಟಳೆಯ ಇಡೀ ಹೊತ್ತಗೆಯನ್ನು ನೋಡಿದರೂ ಅದು ಇದೇ ಬಗೆಯಲ್ಲೇ ಇರುವುದು. ಇದೊಂದೇ ಅಲ್ಲದೇ ಆಡಳಿತದ ಬರವಣಿಗೆಗಳು ಹೆಚ್ಚಿನದಾಗಿ ಇದೇ ಬಗೆಯಲ್ಲೇ ಇರುತ್ತವೆ. ಹೀಗಿದ್ದಾಗ್ಯೂ ನಮಗೆ ಏನೂ ಅನ್ನಿಸುವುದಿಲ್ಲ! ಅದೆಲ್ಲವೂ ಕನ್ನಡವೇ ಅಂದುಕೊಂಡು ಒಪ್ಪಿಕೊಳ್ಳುತ್ತೇವೆ. ಆದರೆ ಇದಕ್ಕಿಂತ ಪೆದ್ದುತನ ಮತ್ತೊಂದಿದೆಯೇ? ಯಾವುದೋ ನುಡಿಯ ಒರೆಗಳನ್ನು ಕನ್ನಡದ ಹೆಸರಲ್ಲಿ ಕನ್ನಡ ಬರಿಗೆಗಳಲ್ಲಿ ಬರೆದೊಡನೆಯೇ ಅವು ಕನ್ನಡವಾಗಿ ಬಿಡುತ್ತವೆಯೇ?

ಬೇರೆ ನುಡುಯ ಒಂದಿಶ್ಟು ಒರೆಗಳು ಇದ್ದರೆ ತಪ್ಪೇನು?

ಆಂಗ್ಲದಲ್ಲಿ ಕೂಡ ನೂರಾರು ಹೆರನುಡಿಯ ಒರೆಗಳು ಸೇರಿಕೊಂಡಿಲ್ಲವೇ?’ ಎಂದೂ ಕೇಳಬಹುದು. ಯಾವುದೇ ನುಡಿಯಲ್ಲಿ ಹೆರನುಡಿಯ ಒರೆಗಳು ಬೆರಕೆಯಾದರೆ ತಪ್ಪೇನೂ ಇಲ್ಲ. ಆದರೆ ಯಾವ ಒರೆಗಳನ್ನು ಯಾವ ನುಡಿಯಿಂದ ಬೆರಕೆ ಮಾಡಿಕೊಳ್ಳಬೇಕು ಅನ್ನುವುದನ್ನೂ ಗಮನಿಸಬೇಕಾಗಿದೆ. ಆಂಗ್ಲದಲ್ಲಿ ಸೇರಿಕೊಂಡಿರುವ ಹೆರನುಡಿಯ ಒರೆಗಳಲ್ಲಿ ಹೆಚ್ಚಿನವು ಅದೇ ನುಡಿಗುಂಪಿನ ಅಂದರೆ ಇಂಡೋ ಯೂರೋಪಿಯನ್ ನುಡಿ ಗುಂಪಿನಿಂದಲೇ ತನಗೆ ಬೇಕಾದ ಒರೆಗಳನ್ನು ಪಡೆದುಕೊಂಡಿದೆ ಹೊರತಾಗಿ ಬೇರೆ ನುಡಿಗುಂಪಿನಿಂದಲ್ಲ! ಬೇರೆ ನುಡಿಗುಂಪಿನಿಂದ (ನಮ್ಮ ಇಡ್ಲಿ, ದೋಸೆಯೂ ಸೇರಿ) ಪಡೆದುಕೊಂಡ ಒರೆಗಳ ಎಣಿಗೆ ತುಂಬಾ ಕಡಿಮೆ. ಆಂಗ್ಲದವರಿಗೆ ಒಂದು ಹೊಸ ಒರೆಯು ಬೇಕಾಯ್ತೆಂದರೆ ಅವರು ಮೊದಲು ಹುಡುಕುವುದು ಅವರದೇ ನುಡಿಗುಂಪಿನ ಲ್ಯಾಟಿನ್, ಜರ್ಮನ್, ಗ್ರೀಕ್ ಮೊದಲಾದ ನುಡಿಗಳಲ್ಲಿಯೇ ಹೊರತಾಗಿ ಕನ್ನಡದಲ್ಲೋ, ತಮಿಳಿನಲ್ಲೋ ಅಲ್ಲ. ಅದಕ್ಕೂ ಮಿಗಿಲಾಗಿ ಅವರು ತಮಗೆ ಬೇಕಾದ ಹೊಸ ಒರೆಗಳನ್ನು ತಮ್ಮ ನುಡಿಯಲ್ಲೇ ಕಟ್ಟಿಕೊಳ್ಳಲು ಮುಂದಾಗುತ್ತಾರೆ.

ಆದರೆ ಕನ್ನಡಿಗರಾದ ನಾವು ಏನು ಮಾಡುತ್ತಿದ್ದೇವೆ ? ನಮಗೆ ಒಂದು ಹೊಸ ಒರೆಯು ಬೇಕಾಯಿತೆಂದರೆ ಕನ್ನಡದಲ್ಲೇ ಅದನ್ನು ಕಟ್ಟಿಕೊಳ್ಳಲು ಮೊಗಸುವುದೇ ಇಲ್ಲ. ಇಲ್ಲವೇ ನಮ್ಮದೇ ಕಂದಮಿಳು ನುಡಿಗುಂಪಿನ ಬೇರೆ ಯಾವುದಾದರೂ ನುಡಿಯಲ್ಲಿ ಅದಕ್ಕೆ ತಕ್ಕ ಒರೆ ಇರುವುದೇ ಅಂತಲೂ ನೋಡುವುದಿಲ್ಲ. ಮಾರಾಗಿ, ಸಕ್ಕದ ಕಸವನ್ನೆ ತಂದು ತುಂಬಿಕೊಳ್ಳುತ್ತೇವೆ. ಇದರ ದೊರೆತ ಏನಾಗಿದೆಯೆಂದರೆ ಅಭಿ ಮತ್ತು ಅನು ಅನ್ನುವಂತಹ ಎಶ್ಟೋ ಹುರುಳೇ ಇರದ ಸಕ್ಕದ ಒರೆಗಳು ಬಗೆ ಬಗೆಯಲ್ಲಿ ಬಂದು ಕನ್ನಡದೊಳಗೆ ಸೇರಿಕೊಂಡಿವೆ! ಅಭಿಮತ, ಅಭಿಪ್ರಾಯ, ಅಭಿನಂದನೆ, ಅಭಿಯಂತರ, ಅಭಿಯೋಜಕ, ಅಭಿವೃದ್ದಿ... ಈ ಎಲ್ಲಾ ಒಂದಕ್ಕೊಂದು ನಂಟಿಲ್ಲದ ಒರೆಗಳಲ್ಲಿ ದಿಟವಾಗಿಯೂ ಅಭಿ ಅಂದರೆ ಏನು? ಹಾಗೆಯೇ ಅನುವಾದ, ಅನುಚಿತ, ಅನುವರ್ತಿ, ಅನುಸಂದಾನ, ಅನುಕೂಲ, ಅನುಸೂಚಿತ.. ಇವುಗಳಲ್ಲಿ ಈ ಅನು ಅಂದರೆ ಯಾರು? ಈ ಎಲ್ಲಾ ಗುಪ್ಪೆ ಗುಪ್ಪೆ ಕಸವನ್ನು ತಂದು ತುಂಬಿಕೊಂಡಿರುವ ನಾವು, ಯಾರಾದರೂ ಒಂದು ಕನ್ನಡದ್ದೇ ಒರೆಯನ್ನು ಹಳೆಗನ್ನಡದಿಂದಲೋ, ಇಲ್ಲವೇ ತಾವೇ ಕಟ್ಟಿಯೋ ಬಳಸಿದಾಗಲಷ್ಟೇ ಅದನ್ನು ಕೆದಕುತ್ತಾ ಹೋಗುತ್ತೇವೆ!

-------------------------------------------------------------------

ಒರೆತಿಳಿಕೆ:

ಆಡಳಿತ – ಸರ್ಕಾರ

ಆಳ್ಮೆಗ – ರಾಜಕಾರಣಿ

ಎತ್ತುಗೆ – ಉದಾಹರಣೆ

ಎಡೆಪಾಲು – Region

ಏಡು – ವರ್ಷ

ಒಕ್ಕೂಟದಾಳ್ವಿಕೆ – ಕೇಂದ್ರ ಸರ್ಕಾರ

ಒತ್ತುಬರಿಗೆ – ಒತ್ತಕ್ಷರ

ಒರೆ – ಪದ, ಶಬ್ದ

ಒರೆತಿಳಿಕೆ – ಶಬ್ದಾರ್ಥ

ಕಂದಮಿಳು – ದ್ರಾವಿಡ

ಕೆಲಸಮನೆ – ಕಚೇರಿ

ಕೇಳ್ವಿ – ಪ್ರಶ್ನೆ

ಗುರ್ತಿಟ – ಲಾಂಛನ

ತುಂಡು – ಅಂಶ

ತೆರವು – ದೂರ

ದೊರೆತ – ಪರಿಣಾಮ, ಫಲಿತಾಂಶ

ನಲ್ಬರಹ – ಸಾಹಿತ್ಯ

ನಲ್ಬರೆಗ – ಸಾಹಿತಿ

ನಾಡಳಿತ – ರಾಜ್ಯ ಸರ್ಕಾರ

ನುಡಿಗಡಣ – Paragraph

ನೂರೇಡು – ಶತಮಾನ

ನೆಲತರಳೆ – ಪ್ರಪಂಚ

ನೆಲೆಪಾಡು – ಪರಿಸ್ಥಿತಿ

ಪದನೆರಕೆ – ಶಬ್ದಕೋಶ

ಪೇರಿಕೆ – ಪಟ್ಟಿ

ಬಗೆಯರಿಕೆ – ಮನವರಿಕೆ

ಬಗೆಯಿಸಿ – ಯೋಚಿಸಿ

ಬರಿಗೆ – ಅಕ್ಷರ

ಒಳಬಗೆಯ ಪಿಸುಮಾತು

- ಶ್ರೀಪತಿ ಗೋಗಡಿಗೆ


ಹಂಚಿರಿ: