ಕನ್ನಡಿಗರು ಕಳೆದುಕೊಂಡ ಕನ್ನಡ! -೧


೨೨ ನಾಲ್ಚಳಿ ೨೦೨೬, ೦೧:೩೭ ಇಳಿಹೊತ್ತು, 1 ಓದು

ಒಳಬಗೆಯ ಪಿಸುಮಾತು

- ಶ್ರೀಪತಿ ಗೋಗಡಿಗೆ

ಕನ್ನಡಿಗರು ಕನ್ನಡವನ್ನು ಕಳೆದುಕೊಂಡಿದ್ದೇವೆ, ಮತ್ತು ಈಗಲೂ ಅಳಿದುಳಿದ ನುಡಿಯನ್ನೂ ಕಳೆದುಕೊಳ್ಳುತ್ತಲೇ ಇದ್ದೇವೆ. ಆದರೆ ಹೇಗೆ ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವು ಹೆಚ್ಚಿನ ಮಂದಿಗೆ ಇಲ್ಲ. ಇಂದು ನಮ್ಮ ನುಡಿಯೊಳಗೆ ಬಂದು ಸೇರಿಕೊಳ್ಳುತ್ತಿರುವ ಆಂಗ್ಲ ಸೊಲ್ಲುಗಳು ಹೆದರಿಕೆ ಹುಟ್ಟಿಸುತ್ತಿವೆ. ಆದರೆ ಬರಿಯ ಆಂಗ್ಲ ಒರೆಗಳಶ್ಟೇ ಅಲ್ಲದೇ ಈ ಹಿಂದೆಯೇ ಬೆರೆತಿರುವ ಸಂಸ್ಕೃತ, ಪರ್ಶಿಯನ್ ಹಾಗೂ ಮರಾಟಿ ಒರೆಗಳ ಎಣಿಕೆಗೇನೂ ಕೊರತೆಯಿಲ್ಲ. ನಾವು ಯಾವಾಗಲೂ ಬಳಸುವ ಬಾವುಟ ಅನ್ನುವುದು ಮರಾಟಿಯದ್ದಾದರೆ, ಕಾನೂನು ಹಾಗೂ ಅದಕ್ಕೆ ನಂಟಿರುವ ಹೆಚ್ಚಿನ ಒರೆಗಳೆಲ್ಲವೂ ಪರ್ಶಿಯನ್ ನುಡಿಯಿಂದ ಬಂದಿರುವಂತವು! ಕನ್ನಡಿಗರ ಭಾಷೆ, ಆಸ್ಮಿತೆ, ಅಭಿಮಾನ, ಸ್ವಾಭಿಮಾನಗಳ ಬಗ್ಗೆ ಯಾವಾಗಲೂ ಮಾತಾಡುತ್ತಲೇ ಇರುತ್ತೇವೆ. ಆದರೆ ಈ ಯಾವ ಒರೆಗಳೂ ನಮ್ಮವಲ್ಲ ಅನ್ನುವುದು ನಮಗೆ ತಿಳಿದಿಲ್ಲ! ಇವೆಲ್ಲವೂ ಸಕ್ಕದ ಎರವಲು ಒರೆಗಳು.

ಕನ್ನಡಿಗರಿಗೆ ಒಗ್ಗದ ಒರೆಗಳು

ಆದರೆ ಸಕ್ಕದಂತಹ ಹೆರ ನುಡಿಗಳಲ್ಲಿ ಬೇರೆ ಬೇರೆ ಬರಿಗೆಗಳ ಒತ್ತುಬರಿಗೆಗಳು ಒಂದೇ ಒರೆಯಲ್ಲಿಯೇ ತುಂಬಾ ಇರುತ್ತವೆ. ಎತ್ತುಗೆಗೆ: ಕ್ಷಮೆ, ಕ್ಷೇಮ, ಮಾತೃ, ಪಿತೃ, ಜ್ಞಾನ, ಪ್ರತಿಭೆ, ಪ್ರಕೃತಿ.. ಹೀಗೆ ಬೇರೆ ಬೇರೆ ಬರಿಗೆಗಳ ಒತ್ತು ಬರಿಗೆಗಳು ಕಂಡು ಬರುತ್ತವೆ. ಇದಲ್ಲದೇ ಕನ್ನಡದಲ್ಲಿ ಕಂಡು ಬಾರದ ಬಗೆಯಲ್ಲಿ ಒರೆಗಳ ಮೊದಲ ಬರಿಗೆಗೇ ಒತ್ತುಬರಿಗೆ ಇರುವುದೂ ಇದೆ. ಎತ್ತುಗೆಗೆ: ಕ್ಷಮೆ, ಕ್ರಾಂತಿ, ಪ್ರಶ್ನೆ, ಭ್ರಮೆ, ಕೃತಿ, ಜ್ಞಾನ. ಇಶ್ಟಕ್ಕೂ ನಿಲ್ಲದೇ ಎರಡು ಮೂರು ಬರಿಗೆಗಳ ಒತ್ತುಬರಿಗೆಗಳು ಒಂದೆಡೆಯೇ ಸೇರಿಕೊಂಡು ಸೊಲ್ಲನ್ನು ತುಂಬಾ ತೊಡಕಿನದಾಗಿ ಮಾಡುವುದನ್ನೂ ಕಾಣುತ್ತೇವೆ. ಎತ್ತುಗೆಗೆ: ಸ್ವಾತಂತ್ರ್ಯ, ಕ್ರೌರ್ಯ, ಅಷ್ಟೈಶ್ವರ್ಯ! ಸಕ್ಕದ ನುಡಿಯೊಳಗೇ ಹುಟ್ಟಿಕೊಂಡ ಈ ಬಗೆಯ ತೊಡಕುಗಳೇ ಆ ನುಡಿಯ ಬೆಳವಣಿಗೆಗೆ ಅಡ್ಡಿಯಾಗಿರುವುದು ಅನ್ನುವುದು ನನ್ನ ಅನಿಸಿಕೆ. ಹೀಗಾಗಿಯೇ ಅದು ನಲ್ಬರಹ ಬರೆಯಲು ಬಳಕೆಯಾದ ಮಟ್ಟಕ್ಕೆ ಮಾತಾಡಲು ಬಳಕೆಯಾಗದೆ ನಿಂತ ನೀರಾಗಿ ಹೋಯಿತು!

ಆದರೆ ಇಲ್ಲಿನ ತೊಡಕು ಏನೆಂದರೆ, ಕನ್ನಡಿಗರಾದ ನಮಗೆ ಈ ಬಗೆಯ ಒರೆಗಳು ಮಾತಿಗೆ ಹೊಂದುವುದೇ ಇಲ್ಲ. ಏಕೆಂದರೆ ನಾವು ಹನ್ನೂರಾರು ಏಡುಗಳಿಂದಲೂ ಸುಳುವಾದ ಕನ್ನಡ ಮಾತನ್ನು ಆಡಿಕೊಂಡು ಬಂದಿರುವುದರಿಂದಾಗಿ ನಮ್ಮ ನಾಲಿಗೆಯ ಹೊರಳುವಿಕೆ ಅದಕ್ಕೆ ತಕ್ಕುದಾಗಿ ಹೊಂದಿಕೊಂಡಿದೆಯೇ ಹೊರತಾಗಿ, ತೊಡಕಿನ ಮಾತನ್ನು ಉಲಿಯಲು ಅಲ್ಲ. ಹಾಗಾಗಿಯೇ ನಮ್ಮಲ್ಲಿ ಹಲವರು ಈ ಬಗೆಯ ಒರೆಗಳನ್ನು ಓದುವಾಗ, ಇಲ್ಲವೇ ಹೇಳುವಾಗ ತುಂಬಾ ತೊಡಕನ್ನು ಪಡುತ್ತಾರೆ, ಹಾಗೂ ಹೆಚ್ಚಿನವರು ತಪ್ಪಾಗಿ ಉಲಿಯುತ್ತಾರೆ. ಈ ಸಲುವಾಗಿಯೇ ಹಿಂದೆಯೇ ನಮ್ಮಲ್ಲಿ ತದ್ಬವ ಒರೆಗಳ ಮಾದರಿ ಹುಟ್ಟಿಕೊಂಡಿತಾದರೂ, ತತ್ಸಮಗಳನ್ನೂ ಹಾಗೆಯೇ ತಂದು ಕನ್ನಡದೊಳಗೆ ತುರುಕುವ ಕೆಲಸವೇನೂ ನಿಲ್ಲಲಿಲ್ಲ! ಇಂದಿಗೂ ಹೊಸ ಹೊಸ ಸಕ್ಕದ ಒರೆಗಳನ್ನು ಹುಡುಕಿ ತಂದು ಕನ್ನಡದ ತಿಳಿನೀರಿನಲ್ಲಿ ಸೇರಿಸುತ್ತಲೇ ಇದ್ದಾರೆ. ಅಂದಿನ ಶ್ರೀವಿಜಯ, ಆಂಡಯ್ಯ ಸೇರಿದಂತೆ ಹಲವು ನಲ್ಬರೆಗರು ಕನ್ನಡದಲ್ಲಿ ಸಕ್ಕದ ಎಲ್ಲೆ ಮೀರಿದ ಸೇರಿಸಿಕೆಯ ಬಗ್ಗೆ ಎಚ್ಚರಿಸಿದರಾದರೂ ನಮ್ಮ ಹೆಚ್ಚಿನ ಬರೆಗರು ಎಣಿಕೆಗೆ ತೆಗೆದುಕೊಳ್ಳದೇ ಹೋದುದರ ದೊರೆತ ಏನಾಗಿದೆಯೆಂದರೆ, ಸತ್ಯ ಮೇವ ಜಯತೇ ಎಂಬ ಹೆರ ನುಡಿಯ ಸೊಲ್ಲು ನಮ್ಮ ನಾಡ ಗುರ್ತಿಟದಲ್ಲಿ ಸೇರಿಕೊಂಡರೂ ನಮಗೆ ಏನೂ ಅನ್ನಿಸುವುದೇ ಇಲ್ಲ!

ಇದು ಹೇಗಾಗಿದೆಯಪ್ಪಾ ಅಂದರೆ ಚೆನ್ನಾಗಿದ್ದ ಕನ್ನಡದೊಳಗೆ ನಾವೇ ಬೇಕೆಂದೇ ಬೇರೆ ತೊಡಕಿನ ಒರೆಗಳನ್ನು ತಂದು ತುರುಕಿಕೊಂಡು ನಾವೇ ತೊಂದರೆ ಪಡುವ ನೆಲೆಪಾಡನ್ನು ಉಂಟು ಮಾಡಿಕೊಂಡಿದ್ದೇವೆ! ಇದರ ಹೆಚ್ಚಿನ ಹೊರೆ ಬೀಳುತ್ತಿರುವುದು ಕನ್ನಡ ಕಲಿಯಲು ಹೊರಡುವ ನಮ್ಮ ಮಕ್ಕಳ ಮೇಲೆ ಅನ್ನುವುದನ್ನು ಯಾರೂ ಗಮನಿಸುತ್ತಿಲ್ಲ!

 

 

ಒರೆತಿಳಿಕೆ:

ಆಡಳಿತ – ಸರ್ಕಾರ

ಆಳ್ಮೆಗ – ರಾಜಕಾರಣಿ

ಎತ್ತುಗೆ – ಉದಾಹರಣೆ

ಎಡೆಪಾಲು – Region

ಏಡು – ವರ್ಷ

ಒಕ್ಕೂಟದಾಳ್ವಿಕೆ – ಕೇಂದ್ರ ಸರ್ಕಾರ

ಒತ್ತುಬರಿಗೆ – ಒತ್ತಕ್ಷರ

ಒಬ್ಬರಿಗ – ಒಂದೇ ಬರಿಗೆಯ ಒತ್ತುಬರಿಗೆ

ಒರೆ – ಪದ, ಶಬ್ದ

ಒರೆತಿಳಿಕೆ – ಶಬ್ದಾರ್ಥ

ಕಂದಮಿಳು – ದ್ರಾವಿಡ

ಕೆಲಸಮನೆ – ಕಚೇರಿ

ಕೇಳ್ವಿ – ಪ್ರಶ್ನೆ

ಗುರ್ತಿಟ – ಲಾಂಛನ

ದೊರೆತ – ಪರಿಣಾಮ, ಫಲಿತಾಂಶ

ನಲ್ಬರೆಗ – ಸಾಹಿತಿ

ನಾಡಳಿತ – ರಾಜ್ಯ ಸರ್ಕಾರ

ನೆಲತರಳೆ – ಪ್ರಪಂಚ

ನೆಲೆಪಾಡು – ಪರಿಸ್ಥಿತಿ

ಪದನೆರಕೆ – ಶಬ್ದಕೋಶ

ಪೇರಿಕೆ – ಪಟ್ಟಿ

ಬಗೆಯರಿಕೆ – ಮನವರಿಕೆ

ಬರಿಗೆ – ಅಕ್ಷರ

ಬರೆಗ – ಲೇಖಕ

ಬಾನೋಡ – ವಿಮಾನ

ಬೆಬ್ಬರಿಗ – ಬೇರೆ ಬೇರೆ ಬರಿಗೆ (ವಿಜಾತಿ)

ಬೇರ್ಮೆ – ಭಿನ್ನತೆ, ವ್ಯತ್ಯಾಸ

ಮಾಟನುಡಿ – ಮಂತ್ರ

ಮುಡಿ – ಮಿಲಿಯನ್

ಸಕ್ಕ – ಸಂಸ್ಕೃತ

ಸುತ್ತೆಡೆ – ಪ್ರದೇಶ

ಸುಳು – ಸುಲಭ

ಹಣಮನೆಬ್ಯಾಂಕ್

ಹನ್ನೂರು – ಸಾವಿರ

ಹನ್ನೂರಾರು – ಸಾವಿರಾರು

ಹಾಡಿಕೆ – ಕಾವ್ಯ

ಹೊತ್ತು – ಕಾಲ

ಹೊದ್ದಿಗೆ – ಅಂಚಿಗೆ

 


ಹಂಚಿರಿ: