ನಮ್ಮ ಮೈಯಲ್ಲಿ ಏನಾದರೂ ಬೇನೆ ಇಲ್ಲವೇ ಏರುಪೇರು ಉಂಟಾದಾಗ ಕೂಡಲೇ ಯಾವುದಾದರೂ ಮದ್ದುಮನೆ ಇಲ್ಲವೇ ಮದ್ದರಿಗರ ಹತ್ತಿರ ಹೋಗುವುದು ಪಳಗು. ಅಲ್ಲಿ ಹೋದಾಗ ಆ ಮದ್ದರಿಗರು ಮದ್ದುಚೀಟಿ ಬರೆದು ಕೊಡುತ್ತಾರೆ ತಾನೇ . ಆದರೆ ಆ ಮದ್ದರಿಗರು ಬರೆದು ಕೊಡುವ ಚೀಟಿಗಳು ಆಂಗ್ಲದಲ್ಲಿ ಇರುತ್ತವೆ. ಅವನ್ನು ಆಂಗ್ಲ ಬರುವವರು ಕೂಡ ಓದುವುದು ತೊಡಕು. ಇದರಿಂದ ಸುಮಾರಿನ ಕನ್ನಡಿಗರಿಗೆ ಮದ್ದರಿಗರು ಯಾವ ಯಾವ ಮದ್ದನ್ನು ಬರೆದಿದ್ದಾರೆ ಎಂಬುದು ತಿಳಿಯುವುದೇ ಇಲ್ಲ. ಅವರು ಕನ್ನಡದಲ್ಲೇ ಮದ್ದುಗಳನ್ನು ಬರೆದು ಕೊಟ್ಟರೆ ಬೇನಿಗನಿಗೂ ತನಗೆ ಯಾವ ಬೇನೆ ಇದೆ ಮತ್ತು ಅದಕ್ಕೆ ಮದ್ದರಿಗರು ಯಾವ ಮದ್ದು ನೀಡಿದ್ದಾರೆ ಎಂಬುದನ್ನು ಸುಳುವಾಗಿ ತಿಳಿದುಕೊಳ್ಳಲು ಆಗುತ್ತದೆ. ಈ ಬೇಡಿಕೆಯು ಹಲವು ಕನ್ನಡಿಗರಿಂದ ಆಗಾಗ ಬರುತ್ತಲೇ ಇತ್ತು .
ಇದನ್ನು ಬಗೆಗೊಂಡ ಕನ್ನಡ ಏಳಿಗೆ ಆಯ್ಮನೆಯ ಹೊಸ ತಲೆಯಾಳು ಪುರುಶೋತ್ತಮ ಬಿಳಿಮಲೆ ಅವರು ಇದೀಗ ಎಲ್ಲಾ ಅರಸು ಮದ್ದುಮನೆಗಳಲ್ಲಿ ಮದ್ದರಿಗರು ಕಡ್ಡಾಯವಾಗಿ ಕನ್ನಡದಲ್ಲೇ ಮದ್ದುಗಳ ಹೆಸರನ್ನು ಬರೆದು ಕೊಡಬೇಕು ಎಂಬುದಾಗಿ ಅಪ್ಪಣೆ ಹೊರಡಿಸಿದ್ದಾರೆ. ಬಿಳಿಮಲೆ ಅವರ ಈ ಹೇಳಿಕೆಯ ಬೆನ್ನಲ್ಲೇ ಬೆಂಗಳೂರಿನ ಕೆ.ವಿ. ಡೆಂಟಲ್ ಕ್ಲಿನಿಕ್ ನ ಡಾ. ಹರಿಪ್ರಸಾದ್ ಸಿ.ಎಸ್. ಅವರು ಕನ್ನಡದಲ್ಲೇ ಮೊದಲ ಬಾರಿಗೆ ಮದ್ದುಗಳ ಹೆಸರನ್ನು ಬರೆದು ಕೊಡಲು ತೊಡಗಿದ್ದಾರೆ. ಅವರು ಕನ್ನಡದಲ್ಲಿ ಬರೆದು ಕೊಟ್ಟ ಮದ್ದುಚೀಟಿ ಕೂಡಣಕೂಟದಲ್ಲಿ ತುಂಬಾ ಹರಿದಾಡುತ್ತಿದ್ದು ಕನ್ನಡಿಗರಿಂದ ಮದ್ದರಿಗ ಹರಿಪ್ರಸಾದ್ ಅವರಿಗೆ ತುಂಬಾ ನಲಿವರಿಕೆಗಳು ತೂರಿ ಬರುತ್ತಿವೆ .