ಕಣ್ಸೆಳೆವ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಹೊಸ ಕನ್ನಡ ಒಗರಿನ ಉಡುಗೆ


೦೪ ನಾಲ್ಮಳೆ ೨೦೨೪, ೦೮:೫೧ ಏರುಹೊತ್ತು, 673 ಓದು

ಕನ್ನಡಿಗರಲ್ಲಿ ನಾಡು - ನುಡಿ ಎಚ್ಚರಿಕೆ ನಾಳಿಂದ ನಾಳಿಗೆ ಹೆಚ್ಚುತ್ತಿದೆ ಅನ್ನುವುದಕ್ಕೆ ನಾಳಿಗೊಂದು ಸುದ್ದಿಗಳು ಬರುತ್ತಿವೆ. ಈ ಸಾಲಿನಲ್ಲಿ ಹಲವು ಆಟದ ಗುಂಪುಗಳು ಕನ್ನಡ ಕಂಪನ್ನು ಹರಡುವ ಕೆಲಸದಲ್ಲಿ ತೊಡಗಿವೆ. ಇದರಿಂದ ಆ ಗುಂಪುಗಳಿಗೆ ಕನ್ನಡಿಗರ ಬೆಂಬಲವೂ ಹೆಚ್ಚಾಗಿ ದೊರೆಯುತ್ತಿದೆ. ಅದರಲ್ಲೂ ಕನ್ನಡ ಮಣ್ಣಿನ ಆಟವಾದ  ಕಬಡ್ಡಿ ಆಟದ ಬೆಂಗಳೂರು ಗುಂಪು ಬೆಂಗಳೂರು ಬುಲ್ಸ್ ತಂಡವು ಮೊದಲಿನಿಂದಲೂ ಕನ್ನಡಿಗರ ಹೆಮ್ಮೆಯ ತಂಡವಾಗಿದೆ .  ಅವರು ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಆಟಗಾರರ ಹೊಸ ತರಬೇತಿ ಉಡುಗೆಗಳನ್ನೂ ಕನ್ನಡ ಒಗರಿನೊಂದಿಗೆ ಅಂದವಾಗಿ ಮಾಡಿಕೊಂಡಿದ್ದು ಕನ್ನಡಿಗರ ಮೆಚ್ಚುಗೆಗೆ ಸಲುವಾಗಿದೆ. 

ಕನ್ನಡದ ಒಗರುಗಳಾದ ಅರಿಶಿನ ಮತ್ತು ಕೆಂಪು ಒಗರಿನ ಬಟ್ಟೆಗಳನ್ನು ತೊಟ್ಟು ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಆಟಗಾರರು ತರಬೇತಿ ಹೊಂದುತ್ತಿದ್ದಾರೆ ಎಂಬುದನ್ನು ಅವರ ಆಳ್ಮೆಯೊಪ್ಪಿತ ಎಕ್ಸ್ ಕಡತವೇ ತಿಳಿಸಿದೆ.

ಬೆಂಗಳೂರು ಬುಲ್ಸ್ ತಂಡದ ಈ ಬಗೆಯ ಕನ್ನಡದೊಲವು ಕಂಡು ಕನ್ನಡಿಗರು ನಲಿವುಗೊಂಡಿದ್ದಾರೆ .  ಮತ್ತು ತಂಡದ ಗೆಲುವಿಗೆ ಬಗೆಯಾರೆ ಹಾರೈಕೆ ತಿಳಿಸಿದ್ದಾರೆ .  ಹಾಗೆಯೆ ಕನ್ನಡಿಗರು ಹೆಚ್ಚಾಗಿ ಬೆಂಬಲಿಸುವ @RCBTweets (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಕ್ರಿಕೆಟ್ ತಂಡದವರು ಈ ಬಗೆಯಲ್ಲಿ ಕನ್ನಡದೊಲವು ತೋರಲು ಮುಂದಾಗದಿರುವುದಕ್ಕೆ ಹಲವು ಕನ್ನಡಿಗರು ಬೇಸರವನ್ನೂ ತೋಡಿಕೊಂಡಿದ್ದಾರೆ .  

ಹಂಚಿರಿ: